ಪಂಚತಂತ್ರ -
	ಕಥಾಸಂಕಲನರೂಪವಾದ ಒಂದು ಗ್ರಂಥ. ಇದು ಮೊತ್ತಮೊದಲು ಮುದ್ರಿತವಾದುದು ಜರ್ಮನಿಯ ಬಾನ್ ನಗರದಲ್ಲಿ. ಹ್ಯಾಮ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದ ಡಾ.ಕೋಸೆಗಾರ್ಟಿನ್ ಆ ನಗರದಲ್ಲಿನ ಮತ್ತು ಇತರ ಕೆಲವು ನಗರಗಳಲ್ಲಿನ ಪುಸ್ತಕ ಭಂಡಾರಗಳಲ್ಲಿದ್ದ ಏಳೆಂಟು ಹಸ್ತಪ್ರತಿಗಳ ಆಧಾರದ ಮೇಲೆ ಈ ಗ್ರಂಥವನ್ನು ಪರಿಷ್ಕರಿಸಿ 1848ರಲ್ಲಿ ಪ್ರಕಟಿಸಿದ ಈ ಪುಸ್ತಕದಲ್ಲಿರುವ ಐದು ತಂತ್ರಗಳ ಕೊನೆಯಲ್ಲಿ
   ಇತ್ತಿಶ್ರೀ ವಿಷ್ಣುಶರ್ಮವಿರಚಿತೇ ಪಂಚತಂತ್ರ
   ಕೇ ಮಿತ್ರಭೇದೋನಾಮ ಪ್ರಥಮಂ ತಂತ್ರಂ ಸಮಾಪ್ತಂ. . . .
   ಮಿತ್ರಸಂಪ್ರಾಪ್ತಿರ್ನಾಮ ದ್ವಿತೀಯಂ ತಂತ್ರಂ ಸಮಾಪ್ತಂ. . . .
   ಕಾಕೋಲೂಕೀಯಂ ನಾಮತೃತೀಯಂ ತಂತ್ರಂ ಸಮಾಪ್ತಂ . . . .
   ಲಬ್ಧಪ್ರಣಾಶೋನಾಮ ಚತುರ್ಥಂ ತಂತ್ರಂ ಸಮಾಪ್ತಂ. . . .
   ಅಪರೀಕ್ಷಿತಕಾರಿತಂ ನಾಮಪಂಚಮಂ ತಂತ್ರಂ ಸಮಾಪ್ತಂ . . . .
ಎಂಬ ವಾಕ್ಯವು ಇರುವುವು. ಮತ್ತು ಗ್ರಂಥದ ಕೊನೆಯಲ್ಲಿ ಏತತ್ ಪಂಚತಂತ್ರಾ ಪರನಾಮಕಂ ಪಂಚಖ್ಯಾನಕಂನಾಮ ನೀತಿಶಾಸ್ತ್ರಸಮಾಪ್ತಂ ಎಂಬ ವಾಕ್ಯವೂ ಆರಂಭದಲ್ಲಿ ಕಲಾರ್ಥಶಾಸ್ತ್ರ ಸಾರಂ ಜಗತಿಸಮಾಲೋಚ್ಯ ವಿಷ್ಣುಶರ್ಮೇದಂ

1 ತಂತ್ರೈ : ಪಂಚಭಿರೇತಚ್ಚಕಾರಸುಮನೋ ಹರಂಶಾಸ್ತ್ರಂ ಎಂಬ ಶ್ಲೋಕವೂ ಇದೆ. ಅಲ್ಲದೆ ಕಥಾಮುಖದಲ್ಲಿ ಅಮರ ಶಕ್ತಿಯೆಂಬ ರಾಜನ ಕೋರಿಕೆಗನುಸಾರವಾಗಿ ವಿಷ್ಣುಶರ್ಮನೆಂಬ ಬ್ರಾಹ್ಮಣನಂ ವಿದ್ಯಾವಿಹೀನರಾದ ಆ ರಾಜನ ಮೂವರು ಕುಮಾರರಿಗೆ ರಾಜನೀತಿಶಾಸ್ತ್ರವನ್ನು ಕಲಿಸುತ್ತೇನೆಂದು ಒಪ್ಪಿಕೊಂಡು ಅದಕ್ಕೋಸ್ಕರ ಈ ಐದು ತಂತ್ರಗಳನ್ನು ಅವರಿಗೆ ಹೇಳಿದನೆಂದು ಉಕ್ತವಾಗಿದೆ.

	ಪಂಚತಂತ್ರ ಎಂಬ ಹೆಸರಿನ ಅರ್ಥದ ಬಗ್ಗೆ ಜಿಜ್ಞಾಸೆ ಇದೆ. ತಂತ್ರ ಎಂದರೆ ಪುಸ್ತಕ; ಪುಸ್ತಕದ ಭಾಗ; ಯುಕ್ತಿ, ಉಪಾಯ, ಅಧ್ಯಾಯ; ನೇಯಲ್ಪಟ್ಟ ವಸ್ತು-ಎಂಬ ವ್ಯಾಖ್ಯೆಗಳಿವೆ.

	ಹರ್ಟೆಲ್ ಎಂಬ ವಿದ್ವಾಂಸ ತಂತ್ರಾಖ್ಯಾಯಿಕಾ ಎಂಬ ಹೆಸರಿನಿಂದ ಕಾಶ್ಮೀರದಲ್ಲಿ ಪ್ರಚಾರದಲ್ಲಿದ್ದ ಪಂಚತಂತ್ರವನ್ನು ಪ್ರಕಟಿಸಿದ (1904) ತಂತ್ರ ಎಂಬ ಪದ ಇಲ್ಲಿ ದೊರೆಯುವಂತೆ ತಂತ್ರಖ್ಯಾನ ಎಂದು ನೇಪಾಲದಲ್ಲಿ ಪ್ರಚಾರದಲ್ಲಿದ್ದ ಪಂಚತಂತ್ರದಲ್ಲಿಯೂ ದೊರೆಯುತ್ತದೆ. ಈ ಪುಸ್ತಕ ಸುಮಾರು ಹದಿನೈದನೆಯ ಶತಮಾನದಲ್ಲಿ ಹುಟ್ಟಿದ್ದಾದರು ತಂತ್ರಖ್ಯಾನವೆಂಬ ಹೆಸರು ತಂತ್ರಾಖ್ಯಾಯಿಕಾ ಎಂಬ ಹೆಸರಿನಂತೆ ಪ್ರಾಚೀನವಾದದ್ದೆಂದು ಹೇಳಿ ಹರ್ಟೆಲ್‍ರವರು ತಂತ್ರ ಎಂಬ ಪದ ಪಂಚತಂತ್ರ, ತಂತ್ರಾಖ್ಯಾಯಿಕಾ ತಂತ್ರಾಖ್ಯಾನ ಎಂಬ ಹೆಸರುಗಳಲ್ಲಿ ಇರುವುದರಿಂದ ಅದು ಮೂಲ ಪುಸ್ತಕದ ಹೆಸರಿನಲ್ಲಿ ಅಂತರ್ಗತವಾಗಿತ್ತೆಂದೂ ಆದ್ದರಿಂದ ತಂತ್ರ ಎಂಬ ಪದಕ್ಕೆ ಈ ಮೂರು ಪುಸ್ತಕಗಳ ಹೆಸರಿನಲ್ಲಿಯೂ ಒಂದೇ ಅರ್ಥವಿರಬೇಕೆಂದೂ ವಾದಿಸಿದ. ಪುಸ್ತಕ, ಪುಸ್ತಕದ ಭಾಗ, ಅಧ್ಯಾಯ ಮೊದಲಾದ ಅರ್ಥಗಳು ಈ ಮೂರು ಹೆಸರುಗಳಲ್ಲಿಯೂ ಹೊಂದುವುದಿಲ್ಲವಾದ್ದರಿಂದ ತಂತ್ರ ಎಂದರೆ ನೀತಿ ಎಂದು ಅರ್ಥೈಸಿದ. ಈ ಅರ್ಥವೂ ಅಪರೀಕ್ಷಿತಕಾರಕ (ಅಸಂಪ್ರೇಕ್ಷ್ಯಕಾರಿತ್ವ) ಎಂಬ (ವಿಷ್ಣುಶರ್ಮಕೃತ) ಪಂಚತಂತ್ರದ ಐದನೆಯ ತಂತ್ರಕ್ಕೆ ಹೊಂದುವುದಿಲ್ಲ. ಅಲ್ಲಿ ಯಾವ ವಿಧವಾದ ನೀತಿ, ಉಪಾಯ ವರ್ಣಿತವಾಗಿಲ್ಲ. ಬ್ರಾಹ್ಮಣ ಮುಂಗಸಿಯನ್ನು ಅಥವಾ ನಾಪಿತ ಭಿಕ್ಷುಗಳನ್ನು ಕೊಂದನೆಂಬ ಮುಖ್ಯ ಕಥೆಯಲ್ಲದೆ ಯಾವ ಉಪಾಯ ಅಥವಾ ಯುಕ್ತಿಯೂ ಅದರಲ್ಲಿಲ್ಲ.

	ಕೋಸೆಗಾರ್ಟೆನ್ ಪ್ರಕಾಶಿಸಿದ ಪುಸ್ತಕದಲ್ಲಿ ಅದರ ಹೆಸರು ಪಂಚತಂತ್ರ ಎಂಬ ಇನ್ನೊಂದು ಹೆಸರುಳ್ಳ ಪಂಚಖ್ಯಾನ ಎಂದು ಕೊನೆಯಲ್ಲಿ ಹೇಳಲ್ಪಟ್ಟಿರುವುದಷ್ಟೆ. ಇದೇ ಎರಡು ಹೆಸರುಗಳೇ ಮುಂಬಯಿ ಸಂಸ್ಕøತ ಗ್ರಂಥಾವಳಿಯಲ್ಲಿ ಬೂಲರ್, ಕೀಲ್ ಹಾರನ್ ಅವರಿಂದ ಪ್ರಕಾಶಿತವಾದ ಪಂಚತಂತ್ರ ಪುಸ್ತಕದಲ್ಲಿಯೂ ಹರ್ಟೆಲ್‍ನಿಂದ ಹಾರ್ವಡ್ ಪ್ರಾಚ್ಯಗ್ರಂಥಮಾಲೆಯಲ್ಲಿ ಪ್ರಕಾಶಿತವಾದ ಪಂಚತಂತ್ರದಲ್ಲಿಯೂ ಹೇಳಲ್ಪಟ್ಟಿವೆ. ಇನ್ನು ಮುಂದೆ ಈ ಎರಡು ಪಂಚತಂತ್ರ ಗ್ರಂಥಗಳನ್ನು ಲಾಟೀಯ ಪಂಚತಂತ್ರ ಮತ್ತು ಪೂರ್ಣಭದ್ರನ ಪಂಚತಂತ್ರ ಎಂದು ನಿರ್ದೇಶಿಸಲಾಗುವುದು. ಗುಜರಾತಿನ ಪಂಚಾಖ್ಯಾನ, ಪಂಚಾಖ್ಯಾನಕಥಾ, ಪಂಚಾಖ್ಯಾನ ಚೌಪಈ, ಪಂಚಾಖ್ಯಾನ ವಾರ್ತಿಕ ಮೊದಲಾದ ಪಂಚತಂತ್ರ ಗ್ರಂಥಗಳಲ್ಲಿ ಪಂಚಾಖ್ಯಾನವೆಂಬ ಒಂದು ಹೆಸರೇ ದೊರೆಯುವುದು. ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ನಾರಾಯಣ, ವೆಂಕಟನಾಥ, ಭಾನುಕವಿ, ದುರ್ಗಸಿಂಹ, ಶಂಕರಕವಿ ಮೊದಲಾದವರಿಂದ ಬರೆಯಲ್ಪಟ್ಟ ಪಂಚತಂತ್ರ ಗ್ರಂಥಗಳಲ್ಲಾದರೆ ಪಂಚತಂತ್ರ ಎಂಬ ಒಂದು ಹೆಸರೇ ದೊರೆಯುವುದು. ಹೀಗೆ ವಿವಿಧ ಪಂಚತಂತ್ರ ಗ್ರಂಥಗಳಲ್ಲಿ ದೊರೆಯುವ ಪಂಚಾಖ್ಯಾನ, ಪಂಚತಂತ್ರ, ತಂತ್ರಾಖ್ಯಾನ (ತಂತ್ರೋಪಾಖ್ಯಾನ, ತಂತ್ರಾಖ್ಯಾಯಿಕಾ) ಎಂಬ ಹೆಸರುಗಳಲ್ಲಿ ಇಂಥದೇ ಪ್ರಾಚೀನವಾದುದೆಂದೂ ಉಳಿದ ಹೆಸರುಗಳು ಈ ಹೆಸರಿನಿಂದ ಜನ್ಯವಾಗಿವೆಯೆಂದೂ ಹೇಳುವುದಕ್ಕೆ ಯಾವ ಆಧಾರವೂ ಇಲ್ಲವಾದ್ದರಿಂದ ಮೂಲಗ್ರಂಥದ ಹೆಸರು ಪಂಚತಂತ್ರಾಖ್ಯಾನ ಎಂದೂ ಪಂಚತಂತ್ರ ಪಂಚಖ್ಯಾನ ಮತ್ತು ತಂತ್ರಾಖ್ಯಾನ ಎಂಬ ಹೆಸರುಗಳು ಈ ಹೆಸರಿನ ಸಂಕ್ಷಿಪ್ತರೂಪಗಳೆಂದೂ ನಾವು ನಿಸ್ಸಂದೇಹವಾಗಿ ಹೇಳಬಹುದು. ಪಂಚತಂತ್ರಾ ಖ್ಯಾನ ಎಂದರೆ ಐದು ತಂತ್ರಗಳ ತತ್ತ್ವಗಳನ್ನು ನಿರೂಪಿಸುವ ಕಥೆಗಳು, ಎಂದರೆ ಐದು ತಂತ್ರಗಳ ಸಾರವನ್ನು ಕಥೆಗಳ ರೂಪದಲ್ಲಿ ಹೇಳುವ ಪುಸ್ತಕ ಎಂದು ಅರ್ಥ. ಪಂಚತಂತ್ರ ಎಂದರೆ ಐದು ತಂತ್ರಗಳ (ಸಾರವನ್ನು ಕಥೆಗಳ ರೂಪದಲ್ಲಿ ಹೇಳುವ) ಪುಸ್ತಕ. ಪಂಚಾಖ್ಯಾನ ಎಂದರೆ ಐದು (ತಂತ್ರಗಳ ಸಾರವನ್ನು ಹೇಳುವ) ಕಥಾ (ರೂಪವಾದ) ಪುಸ್ತಕ, ತಂತ್ರಾಖ್ಯಾನ ಎಂದರೆ ಐದು ತಂತ್ರಗಳ ಸಾರವನ್ನು ನಿರೂಪಿಸುವ ಕಥಾರೂಪವಾದ ಪುಸ್ತಕ; ತಂತ್ರಖ್ಯಾಯಿಕಾ ಎಂಬ ಹೆಸರಿಗೂ ಇದೇ ಅರ್ಥ.

	2. ತಂತ್ರವೆಂದರೆ ಶಾಸ್ತ್ರ; ಪ್ರಕೃತದಲ್ಲಿ ರಾಜನೀತಿಶಾಸ್ತ್ರ, ಐದು ರಾಜನೀತಿ ಶಾಸ್ತ್ರಗಳು ಯಾವುವೆಂದು ಪಂಚತಂತ್ರಗ್ರಂಥದಲ್ಲಿ ಹೇಳಿಲ್ಲ. ಆದರೆ ಲಾಟೀಯ ಪಂಚತಂತ್ರದಲ್ಲಿ ಚೆನ್ನಾಗಿ ಪರೀಕ್ಷಿಸಿ ಕಾರ್ಯಮಾಡುವಿಕೆ, ಮಿತ್ರಾಪ್ತಿ, ಅವಿಶ್ವಾಸಗಳು ಕ್ರಮವಾಗಿ ವಿಷ್ಣುಗುಪ್ತ (ಚಾಣಕ್ಯ) ಶುಕ್ರಾಚಾರ್ಯ (ಉಶನಸ್) ಮತ್ತು ಬೃಹಸ್ಪತಿಗಳು ರಚಿಸಿದ ರಾಜನೀತಿ ಶಾಸ್ತ್ರಗಳಲ್ಲಿ ಪ್ರತಿಪಾದಿತವಾಗಿರುವ ಮುಖ್ಯ ತತ್ತ್ವಗಳೆಂದು ಹೇಳಿದೆ. ಈ ಮುಖ್ಯ ತತ್ತ್ವಗಳೇ ಪಂಚತಂತ್ರದ 5, 2, 3ನೆಯ ತಂತ್ರಗಳಲ್ಲಿ ಮುಖ್ಯ ಕಥೆಯು ನಿರೂಪಿಸಲ್ಪಟ್ಟಿರುವುದರಿಂದ ಆ ಮೂರು ತಂತ್ರಗಳು ಈ ಮೂರು ರಾಜನೀತಿ ತತ್ತ್ವಗಳನ್ನು ಕಥೆಯ ರೂಪದಲ್ಲಿ ಬೋಧಿಸುವುದೆಂದು ಊಹೆ. ಹಾಗೆಯೇ 4ನೆಯ ತಂತ್ರ ಕೂಡ ಕಣಿಕ ಭಾರದ್ವಾಜನ ರಾಜನೀತಿಶಾಸ್ತ್ರದ ಮುಖ್ಯತತ್ವವನ್ನು ಎಂದರೆ ವಂಚನೆಯನ್ನು ಉಪದೇಶಿಸುತ್ತದೆಂದು ಊಹೆ. ಒಂದನೆಯ ತಂತ್ರದಲ್ಲಿ ನಿರೂಪಿತವಾಗಿರುವ ಮಿತ್ರಭೇದ ಯಾರಿಂದ ಬರೆಯಲ್ಪಟ್ಟ ರಾಜನೀತಿಶಾಸ್ತ್ರದ ಮುಖ್ಯ ತತ್ತ್ವವೆಂಬ ವಿಷಯ ಸದ್ಯಕ್ಕೆ ತಿಳಿಯದು.

	ಮೇಲೆ ಹೇಳಿದ ತಂತ್ರಗಳು ಮೇಲೆ ಹೇಳಿದ ವಿಷಯಗಳನ್ನು ಮುಖ್ಯ ಕಥೆಗಳಲ್ಲಿ ನಿರೂಪಿಸಿವೆ. ಒಳಕಥೆಗಳಾದರೊ ಪರಾಕ್ರಮಕ್ಕಿಂತ ಬುದ್ಧಿ ಬಲವೇ ಮೇಲಾದುದು, ಇಂದ್ರಿಯ ಚಾಪಲ್ಯದಿಂದ ಕೇಡುಂಟಾಗುವುದು ಎಂದು ಮೊದಲಾದ ಎಲ್ಲಾ ರಾಜನೀತಿಶಾಸ್ತ್ರಗ್ರಂಥಗಳಿಗೂ ಸಾಧಾರಣವಾದ ನೀತಿ ವಿಷಯಗಳನ್ನು ಬೋಧಿಸುತ್ತವೆ.

	3 ಪಂಚತಂತ್ರದ ಕರ್ತೃ ವಿಷ್ಣಶರ್ಮನೆಂದು ಹಲವು ಪುಸ್ತಕಗಳಲ್ಲಿದೆ. ಸೋಮಶರ್ಮನೆಂದು ದಾಕ್ಷಿಣಾತ್ಯ ಪಂಚತಂತ್ರದ ಬೃಹತ್ಪಾಠದಲ್ಲಿಯೂ ವಸುಭಾಗಭಟ್ಟನೆಂದು ದುರ್ಗಸಿಂಹನ ಪಂಚತಂತ್ರದಲ್ಲಿಯೂ ಬಿದ್‍ಪಇ ಎಂದರೆ ವಿದ್ಯಾಪತಿ ಎಂದು ಅರಬ್ಬೀ ಭಾಷೆಯಲ್ಲಿನ ಪಂಚತಂತ್ರಗಳಲ್ಲಿಯೂ ಇರುವುದು. ಪಂಚತಂತ್ರದ ಕರ್ತೃವಿನ ಹೆಸರು ಇವುಗಳಲ್ಲಿ ಒಂದೊ ಅಥವಾ ಬೇರೆ ಒಂದೊ ಎಂಬುದನ್ನು ನಿರ್ಧರಿಸಲು ಯಾವ ಆಧಾರವೂ ದೊರೆತಿಲ್ಲ.

	4 ಅವನು ಇಂಥ ಪ್ರಾಂತ್ಯದಲ್ಲಿ ಜೀವಿಸಿದ್ದನೆಂದು ಖಚಿತವಾಗಿ ಹೇಳುವುದಕ್ಕೂ ಯಾವ ಆಧಾರವೂ ದೊರೆತಿಲ್ಲ. ಕಾಶ್ಮೀರದಲ್ಲಿದ್ದನೆಂದು ಹರ್ಟೆಲ್‍ನ ಅಭಿಪ್ರಾಯ ಗ್ರಂಥದಲ್ಲಿ ದಕ್ಷಿಣದೇಶದಲ್ಲಿನ ಮಹಿಲಾರೋಪ್ಯ ನಗರದ ಹೆಸರು ಹೇಳಲ್ಪಟ್ಟಿರುವುದರಿಂದ ಕರ್ತೃ ದಕ್ಷಿಣದೇಶದಲ್ಲಿ ಜೀವಿಸಿದ್ದನೆಂದು ಕೆಲವರ ಅಭಿಪ್ರಾಯ ಮೂಲಗ್ರಂಥ ಯಾವ ಭಾಷೆಯಲ್ಲಿ ರಚಿಸಲ್ಪಟ್ಟಿತು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಪ್ರಾಕೃತ ಎಂದು ಕೆಲವರ ಅಭಿಪ್ರಾಯವಾದರೆ ಸಂಸ್ಕøತ ಎಂದು ಹರ್ಟೆಲನ ಅಭಿಪ್ರಾಯ. ಈ ಅಭಿಪ್ರಾಯಕ್ಕೇ ಈಗ ಬಹು ವಿದ್ವಾಂಸರಿಂದ ಮನ್ನಣೆ ದೊರೆತಿದೆ.

	5 ಪಂಚತಂತ್ರದ ಆರಂಭದಲ್ಲಿರುವ ಶ್ಲೋಕದಲ್ಲಿ ರಾಜನೀತಿಶಾಸ್ತ್ರದ ಕರ್ತೃವಾದ ಚಾಣಕ್ಯನ ಹೆಸರು ಬಂದಿದೆ. ಇವನು ಕ್ರಿ.ಪೂ 3ನೆಯ ಶತಮಾನದಲ್ಲಿ ರಾಜ್ಯವಾಳುತ್ತಿದ್ದ ಚಂದ್ರಗುಪ್ತಮೌರ್ಯನ ಕಾಲದಲ್ಲಿದ್ದನೆಂದು ನಂಬಲ್ಪಟ್ಟಿರುವುದರಿಂದ ಈ ಗ್ರಂಥ ಕ್ರಿ.ಪೂ 3ನೆಯ ಶತಮಾನಕ್ಕಿಂತ ಈಚಿನದಾಗಿರಬೇಕು. ಕ್ರಿ.ಶ 531ರಿಂದ 579ರ ವರೆಗೆ ಪಾರ್ಸೀ ದೇಶವನ್ನು ಆಳುತ್ತಿದ್ದ ಖುಸ್ರು ಅನೋ ಷೇರ್ವಾನ್ ಎಂಬ ರಾಜ ಬುರ್ಸು ಏ ಎಂಬ ಪಂಡಿತನ ಮೂಲಕ ಈ ಗ್ರಂಥವನ್ನು ಪಾಲವಿ ಭಾಷೆಗೆ ಪರಿವರ್ತನೆ ಮಾಡಿಸಿದನೆಂದು ತಿಳಿಯುವುದರಿಂದ ಈ ಗ್ರಂಥ ಕ್ರಿ.ಶ 579ಕ್ಕಿಂತ ಹಿಂದೆಯೇ ರಚಿತವಾಗಿರಬೇಕು.

	ಪಂಚತಂತ್ರದಲ್ಲಿ ದೀನಾರ ಎಂಬ ನಾಣ್ಯದ ಹೆಸರು ಹೇಳಲ್ಪಟ್ಟಿದೆ. ಇದು ದೇನಾರಿಯಸ್ ಎಂಬ ಲ್ಯಾಟಿನ್ ಪದದ ತದ್ಭವ. ಈ ಪದದಲ್ಲಿರುವ ಏಕಾರ ಈಕಾರವಾಗಿ ಮಾರ್ಪಾಟು ಆದುದು ಕ್ರಿ.,ಶ 2ನೆಯ ಶತಮಾನದ ಮಧ್ಯಭಾಗದಲ್ಲಾದ್ದರಿಂದ ಪಂಚತಂತ್ರ ಕ್ರಿ.ಶ ಸುಮಾರು 300ರಲ್ಲಿ ಬರೆಯಲ್ಪಟ್ಟಿತೆಂದು ಹರ್ಟೆಲ್ ಮೊದಲಾದ ವಿದ್ವಾಂಸರ ಊಹೆ. ಆದರೆ ಲ್ಯಾಟಿನ್ ಪದಗಳಲ್ಲಿ ಏಕಾರದ ಸ್ಥಾನದಲ್ಲಿ ಈಕಾರವನ್ನು ಹೇಳುವುದು ಕ್ರಿಸ್ತಶಕಕ್ಕಿಂತ ಹಿಂದೆಯೇ ರೂಢವಾಗಿತ್ತೆಂದು ಕಂಡುಬಂದಿರುವುದರಿಂದ ಮೇಲೆ ಹೇಳಿದ ನಿರ್ಣಯಕ್ಕೆ ಆಧಾರ ಸಾಲದು.

	6 ಪಂಚತಂತ್ರ ಕಥಾಸಂಕಲನ ರೂಪವಾದ ಗ್ರಂಥವಾದುದರಿಂದ ಮಧ್ಯಮಧ್ಯೆ ಕಥೆಗಳನ್ನು ಯಾರು ಬೇಕಾದರೂ ಸೇರಿಸುವುದಕ್ಕೂ ಬಿಟ್ಟುಬಿಡುವುದಕ್ಕೂ ಅವಕಾಶವಿರುವುದು. ಹಾಗೆಯೇ ಮಧ್ಯ ಮಧ್ಯೆ ಶ್ಲೋಕಗಳನ್ನು ಸೇರಿಸುವುದಕ್ಕೂ ಅಥವಾ ಬಿಟ್ಟುಬಿಡುವುದಕ್ಕೂ ಅವಕಾಶವಿರುವುದು. ಈ ಅವಕಾಶವನ್ನು ಕೆಲವರು ಉಪಯೋಗಿಸಿಕೊಂಡಿದ್ದರಿಂದ ಪಂಚತಂತ್ರದಲ್ಲಿ ಅನೇಕ ಪಾಠಭೇದಗಳು ಹುಟ್ಟಿರುವುವು. ಉದಾಹರಣೆಗಾಗಿ, ಕಾಶ್ಮೀರದ ಪಂಚತಂತ್ರದಲ್ಲಿ 37 ಕಥೆಗಳು, 523 ಶ್ಲೋಕಗಳೂ ದಾಕ್ಷಿಣಾತ್ಯ ಪಂಚತಂತ್ರದಲ್ಲಿ 33 ಕಥೆಗಳು. 291 ಶ್ಲೋಕಗಳೂ ಪೂರ್ಣಭದ್ರನ ಪಂಚತಂತ್ರದಲ್ಲಿ 78 ಕಥೆಗಳು. 101 ಶ್ಲೋಕಗಳೂ ಇವೆ. ಹರ್ಟೆಲ್‍ರವರು ಈ ಮೂರು ಸಂಸ್ಕøತ ಪಂಚತಂತ್ರಗಳ ಪಾಠವನ್ನು ಪರಿಷ್ಕರಿಸಿ ಪ್ರಕಾಶಿಸಿರುವರಲ್ಲದೆ ನೇಪಾಳದಲ್ಲಿ ದೊರೆತಿರುವ ತಂತ್ರಖ್ಯಾನ, ದಾಕ್ಷಿಣಾತ್ಯ ಪಂಚತಂತ್ರದ ಬೃಹತ್ಪಾಠ, ಧರ್ಮಪಂಡಿತ ಕೃತ ಪಂಚತಂತ್ರ, ಮೇಘವಿಜಯಕೃತ ಪಂಚಾಖ್ಯಾನೋದ್ಧಾರ, ಅನಂತಕೃತ ಕಥಾಮೃತನಿಧಿ, ರಾಮಚಂದ್ರಕೃತ ಪಂಚೋಪಾಖ್ಯಾನ, ಅಜ್ಞಾತ ಕರ್ತೃಕ ಪಂಚೋಪಾಖ್ಯಾನ, ರಾಮಮಿಶ್ರಕೃತ ಪಂಚಾಖ್ಯಾನಶಾಸ್ತ್ರ, ಅಜ್ಞಾತ ಕರ್ತೃಕ ಪಂಚಾಖ್ಯಾನೋದ್ಧಾರ-ಹೀಗೆ ಸಂಸ್ಕøತದಲ್ಲಿ ಬರೆಯಲ್ಪಟ್ಟ 9 ಪಂಚತಂತ್ರ ಪಾಠಗಳಲ್ಲಿ ಇರುವ ಕಥೆಗಳ ವಿವರಗಳನ್ನು ಪ್ರಕಟಿಸಿರುತ್ತಾರೆ. 

	7 ಪಂಚತಂತ್ರದ ಪಾಠಭೇದಗಳಲ್ಲಿ 1200ಕ್ಕಿಂತ ಹಿಂದಿನವು ಪ್ರಾಚೀನ, ಈಚಿನವು ಅರ್ವಾಚೀನ, ತಂತ್ರಾಖ್ಯಾಯಿಕೆ, ದಾಕ್ಷಿಣಾತ್ಯ ಪಂಚತಂತ್ರ, ಲಾಟೀಯ ಪಂಚತಂತ್ರ ಮತ್ತು ಪೂರ್ಣಭದ್ರನ ಪಂಚತಂತ್ರ ಇವು ನಾಲ್ಕೂ ಪ್ರಾಚೀನ. ಹಾಗೆಯೇ ಕ್ಷೇಮೇಂದ್ರನ ಬೃಹತ್ಕಥಾಮಂಜರಿಯಲ್ಲಿಯೂ ಮತ್ತು ಸೋಮದೇವಭಟ್ಟನ ಕಥಾ ಸರಿತ್ಸಾಗರದಲ್ಲಿಯೂ ಇರುವ ಪಂಚತಂತ್ರ ಕಥೆಗಳ ಸಂಗ್ರಹವೂ ಪ್ರಾಚೀನವೇ. ಇವನ್ನು ಮತ್ತು ಮೇಲೆ ಹೇಳಿದ, ಪಾಲವಿ ಭಾಷೆಯಲ್ಲಿ ಬರೆಯಲ್ಪಟ್ಟ ಪಂಚತಂತ್ರದ ಅನುವಾದದ ಅನುವಾದಗಳನ್ನು (ಈ ಅನುವಾದಗಳು ಸಿರಿಯಾಕ್ ಭಾಷೆಯಲ್ಲಿಯೂ ಅರಬ್ಬೀ ಭಾಷೆಯಲ್ಲಿಯೂ ಇದೆ) ಆಧಾರವಾಗಿ ಮಾಡಿಕೊಂಡು ಫ್ರ್ಯಾಂಕ್ಲಿನ್ ಎಜರ್ಟನ್ ಎಂಬ ವಿದ್ವಾಂಸ ಪಂಚತಂತ್ರ ರಿಕನ್‍ಸ್ಟ್ರಕ್ಟೆಡ್ ಎಂಬ ಗ್ರಂಥವನ್ನು ಬರೆದ. ಹರ್ಟೆಲ್‍ನ ಅಭಿಪ್ರಾಯದಂತೆ ಕಾಶ್ಮೀರಿ ತಾಂತ್ರಾಖ್ಯಾಯಿ ಮೂಲ ಪಂಚತಂತ್ರವಲ್ಲದಿದ್ದರೂ ಅದಕ್ಕೆ ಅತ್ಯಂತ ಹತ್ತಿರದ್ದು. ಎಜರ್ಟನ್‍ಗೆ ಈ ಅಭಿಪ್ರಾಯ ಸಮ್ಮತವಾಗಲಿಲ್ಲವಾಗಿ ಆತ ಮೇಲೆ ಹೇಳಿದ ಪಂಚತಂತ್ರ ಪಾಠಗಳ ಆಧಾರದಿಂದ ಮೂಲ ಪಂಚತಂತ್ರದ ಪಾಠವನ್ನು ಪುನಾ ವಿರಚಿಸಿದ್ದಾನೆ. ಹೀಗೆ ಪುನಾ ವಿರಚಿತವಾದ ಪಂಚತಂತ್ರದ ಮೂಲದ ಎಲ್ಲ ಶ್ಲೋಕಗಳೂ ವಾಕ್ಯಗಳೂ ಇರುವವೇ ಎಂಬುದು ಸಂದೇಹಾಸ್ಪದ.

	8 ಮೇಲೆ ಹೇಳಿದ ಪಂಚಾಖ್ಯಾನೋದ್ಧಾರ, ಕಥಾಮೃತನಿಧಿ ಮೊದಲಾದ ಪಂಚತಂತ್ರ ಪಾಠಗಳ ಕರ್ತೃಗಳಲ್ಲಿ ಕೆಲವರು ಮೂಲಪಂಚತಂತ್ರದ ಕೆಲವು ವಾಕ್ಯಗಳ ಜೊತೆಗೆ ತಮ್ಮ ಸ್ವಂತ ವಾಕ್ಯಗಳನ್ನೂ ಸೇರಿಸಿ ಗ್ರಂಥಗಳನ್ನು ರಚಿಸಿರುತ್ತಾರೆ. ಇನ್ನು ಕೆಲವು ಎಲ್ಲ ವಾಕ್ಯಗಳೂ ಆಯಾ ಗ್ರಂಥಕರ್ತೃಗಳದೇ ಆಗಿವೆ. ಇಂಥ ಗ್ರಂಥಗಳಲ್ಲಿ ತಂತ್ರೋಪಾಖ್ಯಾನ ಒಂದು. ಇದು ಒಂದೇ ಒಂದು ಲಿಖಿತ ಪುಸ್ತಕದ ಆಧಾರದ ಮೇಲೆ ಅನಂತಶಯನದಲ್ಲಿ 1938ರಲ್ಲಿ ಪ್ರಕಟಿಸಲ್ಪಟ್ಟಿತು. ಇದರಲ್ಲಿ ನಂದಕ ಪ್ರಕರಣ, ಪಕ್ಷಿ ಪ್ರಕರಣ, ಪಾಂಡುಕ ಪ್ರಕರಣ ಎಂದು ಮೂರು ಪ್ರಕರಣಗಳಿವೆ, ಇದೇ ಮೂರು ಪ್ರಕರಣಗಳು ಮತ್ತು ಪಿಶಾಚ ಪ್ರಕರಣವೂ (ಒಂದು ಕಥಾಮುಖವೂ) ಲಾವೋಸಿನ ಪಂಚತಂತ್ರದಲ್ಲಿ (ಇದನ್ನು ತಂತೈ ಎಂದು ಕರೆಯೋಣ) ಇವೆ. ಯಾವ ದ್ವೀಪದ ತಂತ್ರಿಯಲ್ಲಿ (ಎಂದರೆ ತಂತ್ರಿಕಾಮಂದಕ ಎಂಬ ಪಂಚತಂತ್ರದ ಅನುವಾದದಲ್ಲಿ) ಕಥೆ ಮುಖನಂದಕ ಪ್ರಕರಣ ಮಾತ್ರವಿದ್ದರೂ ಇತರ ಮೂರು ಪ್ರಕರಣಗಳೂ ಇದ್ದುವೆಂದು ಹೇಳಲ್ಪಟ್ಟಿದೆ. ಹಾಗೆಯೇ ತಮಿಳಿನಲ್ಲಿ ಅಸಮಗ್ರವಾದ ಒಂದು ಪಂಚತಂತ್ರ ಕಥೆಯಲ್ಲಿ (ಇದನ್ನು ತಂತ್ರು ಎಂದು ಕರೆಯೋಣ) ಕಥಾಮುಖ, ನಂದಕಾ ಪ್ರಕರಣ ಮತ್ತು ಮಂದಕ ಪ್ರಕರಣದಲ್ಲಿ 12 ಕಥೆಗಳು ಮಾತ್ರ ಇವೆ. ಈ ತಂತ್ರೋಪಾಖ್ಯಾನದ ನಂದಕ ಪ್ರಕರಣದ ಮುಖಕಥೆ ಮತ್ತು 20 ಒಳಕಥೆಗಳೇ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ-ತಂತ್ರುವಿನಲ್ಲಿಯೂ ಇರುವುದಲ್ಲದೆ ತಂತೈಯಲ್ಲಿನ ಶಕುನ ಪ್ರಕರಣದ ಮುಖ ಕಥೆಯೂ ಮೊದಲು 13 ಒಳಕಥೆಗಳೂ ಅದೇ ಕ್ರಮದಲ್ಲಿ ತಂತ್ರೋಪಾಖ್ಯಾನ ಪಕ್ಷಿ ಪ್ರಕರಣದಲ್ಲಿ ದೊರೆಯುವುವು. ಕಥಾಮುಖವು 18 ಒಳಕಥೆಗಳೂ ಯವದ್ವೀಪದ ತಂತ್ರಿಯಲ್ಲಿ ಇರುವುವು. ಸಯಾಮಿನ ಪಂಚತಂತ್ರದ ಸಂಗ್ರಹದಲ್ಲಿಯೂ (ಇದನ್ನು ತಂತ್ರೈ ಎಂದು ಕರೆಯೋಣ) ದೊರೆಯುವವು. ಆದ್ದರಿಂದ ತಂತ್ರೋಪಾಖ್ಯಾನ ತಂತ್ರಿ, ತಂತ್ರು, ತಂತೈ ಮತ್ತು ತಂತೈ ಇವೆಲ್ಲ ಪಂಚತಂತ್ರ ಸಂಗ್ರಹಗಳಿಗೂ ಒಂದೇ ಸಂಸ್ಕøತ ಗ್ರಂಥಮೂಲವೆಂದು ಸ್ಪಷ್ಟ. ಹಾಗೆಯೇ ನಮಗೆ ದೊರೆತಿರುವ ತಂತ್ರೋಪಾಖ್ಯಾನ ಅಸಮಗ್ರ ಗ್ರಂಥವೆಂದೂ ಅದರಲ್ಲಿ ಕಥಾ ಮುಖವು ಪಿಶಾಚಪ್ರಕರಣವು ನಷ್ಟವಾಗಿದೆಯೆಂದೂ ಸ್ಪಷ್ಟ. ಥಾಯ್ ಭಾಷೆಯಲ್ಲಿ ಒಂದು ಪಿಶಾಚ ಪ್ರಕರಣ ದೊರೆಯುವುದಾದರೂ ಅದರಲ್ಲಿನ ಕಥೆಗಳಿಗೂ ಪಂಚತಂತ್ರಕ್ಕೂ ಯಾವ ಸಂಬಂಧವೂ ಇಲ್ಲ. ಆ ಭಾಷೆಯಲ್ಲಿರುವ ಪಕ್ಷಿ ಪ್ರಕರಣದ ಮುಖಕಥೆ ತಂತ್ರೋಪಾಖ್ಯಾದ ಮತ್ತು ತಂತ್ರೈಯಿನ ಪಕ್ಷಿ ಪ್ರಕರಣದ ಮುಖಕಥೆಯೇ ಆಗಿದೆ. ಅದರ ಒಳಕಥೆಗಳಲ್ಲಿ ಕೆಲವು ಈ ಎರಡರ ಪಕ್ಷಿ ಪ್ರಕರಣದಲ್ಲಿ ಇರುವವು. 

	ಮೇಲೆ ಹೇಳಿದ ತಂತ್ರಿಕಾಮಂದಕದ ಆಧಾರದ ಮೇಲೆ ಯಾವ ದ್ವೀಪದಲ್ಲಿಯೇ ನಾಲ್ಕು ತಂತ್ರಿಗ್ರಂಥಗಳೂ (ದೆಮುಂಗ್ ಪದ್ಯಮಯವಾದ ತಂತ್ರಿ, ಕದಿರಿ ಪದ್ಯಮಯವಾದ ತಂತ್ರಿ ಮತ್ತು ಹೊಸ ಯವದ್ವೀಪೀಯಭಾಷೆಯಲ್ಲಿ ಬರೆಯಲ್ಪಟ್ಟ ಎರಡು ತಂತ್ರಿಗಳು) ಬಲಿದ್ವೀಪದಲ್ಲಿ ಐದಾರು ತಂತ್ರಿಗಳೂ ಮಧುರೈ ದ್ವೀಪದಲ್ಲಿ ಎರಡು ತಂತ್ರಿಗಳೂ ಹುಟ್ಟಿವೆ. ಈ ತಂತ್ರಿಗ್ರಂಥಗಳಲ್ಲಿಯೂ ತಂತ್ರೈ, ತಂತೈ, ಮತ್ತು ತಂತ್ರುವಿನಲ್ಲಿಯೂ ಇರುವ ಕಥಾಮುಖದ ಸಾರ ಹೀಗಿದೆ; ಒಬ್ಬ ರಾಜನು ಒಂದು ದಿವಸ ಅಲಂಕೃತರಾದ ಇಬ್ಬರು ಮದುಮಕ್ಕಳು ಬಂಧುಗಳಿಂದ ಪರಿವೃತನಾಗಿ ಮೆರವಣಿಗೆಯಲ್ಲಿ ಹೋಗುತ್ತಿರುವುದನ್ನು ನೋಡಿ ಇನ್ನು ಮೇಲೆ ತಾನೂ ಪ್ರತಿದಿನ ಒಬ್ಬ ಕನ್ನಿಕೆಯನ್ನು ವಿವಾಹವಾಗಬೇಕೆಂದು ನಿರ್ಧರಿಸಿ ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಬೇಕೆಂದು ಮಂತ್ರಿಗೆ ಆಜ್ಞಾಪಿಸುತ್ತಾನೆ. ಈ ಆಜ್ಞೆಯಂತೆ ಮಂತ್ರಿ ಪ್ರತಿದಿನವೂ ಒಬ್ಬ ಕನ್ನಿಕೆಯನ್ನು ವಿವಾಹಕ್ಕಾಗಿ ಒದಗಿಸುತ್ತಾನೆ. ಹೀಗೆ ಕೆಲವು ದಿನಗಳು ಕಳೆದ ಅನಂತರ ಕನ್ನಿಕೆಯರ ಅಭಾವವುಂಟಾಗಲಾಗಿ ಭೀತನಾದಾಗ ಮಂತ್ರಿ ಅವನ ಮಗಳು (ಅವಳಿಗೆ ತಂತ್ರ ತಂತ್ರಿ, ತಂತೈ ಅಥವಾ ತಂತೈ ಎಂದು ಹೆಸರು) ಅವನ ಬಳಿಗೆ ಬಂದು ನಾಳೆ ನನ್ನನ್ನು ನೀವು ರಾಜನಿಗೆ ವಿವಾಹಮಾಡಿಕೊಡಿ, ನಾಳಿದ್ದಿನಿಂದ ಈ ತೊಂದರೆ ನಿಮಗೆ ಬಾರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ಹೇಳಿ ರಾಜನನ್ನು ಮದುವೆಯಾಗುವಳು. ಆ ದಿನ ರಾತ್ರಿ ಅವಳು ಶಯನಗೃಹದಲ್ಲಿದ್ದ ಒಬ್ಬಳು ದಾಸಿಯನ್ನು ಕರೆದು ರಾಜರು ನಿದ್ರೆಮಾಡುವಾಗ ನಾವು ಎಚ್ಚರದಿಂದ ಕಾಯುತ್ತಿರಬೇಕು. ನಾನು ಒಂದು ಕಥೆ ಹೇಳುತ್ತೇನೆ ಕೇಳು ಎಂದು ಕಥೆ ಹೇಳುವಳು. ರಾಜ ಕಥೆಯನ್ನು ಆದರದಿಂದ ಕೇಳಿ ಇನ್ನೂ ಕೇಳಬೇಕೆಂಬ ಕುತೂಹಲದಿಂದ ಮಾರನೆಯ ದಿನ ಮದುವೆ ಬೇಡವೆಂದು ಮಂತ್ರಿಗೆ ಹೇಳುವನು, ಹೀಗೆಯೇ ಮಂತ್ರಿಕುಮಾರಿ ಹೇಳಿದ ಕಥೆಗಳನ್ನು ಅನೇಕ ದಿನಗಳು ಕೇಳಿ ಮೆಚ್ಚಿ ಅವಳನ್ನು ಪಟ್ಟಮಹಿಷಿಯನ್ನಾಗಿ ಮಾಡಿಕೊಳ್ಳುವನು. ನಿತ್ಯವೂ ವಿವಾಹ ಮಾಡಿಕೊಳ್ಳುವ ಪದ್ಧತಿ ತಪ್ಪಿ ಹೋಯಿತು.

	ಹೆಮಿಂಗ್ ಪದ್ಯಮಯ ತಂತ್ರಿಯಲ್ಲಿ ಅದರ ಕರ್ತೃ ಬಸುಭಾಗ ಎಂದು ಹೇಳಿದೆ. ತಂತ್ರಕಾಮಂದಕದಲ್ಲಿ ಇರುವ 77 ಶ್ಲೋಕಗಳಲ್ಲಿ 18 ಶ್ಲೋಕಗಳನ್ನು ಬಸುಭಾಗ ಹೇಳಿದನೆಂದೂ ಉಲ್ಲೇಖವಿದೆ. ತಂತ್ರೋಪಾಖ್ಯಾನದಲ್ಲಿಯೂ ಹೀಗೆಯೇ ಅಲ್ಲಿರುವ 53 ಶ್ಲೋಕಗಳು ವಸುಭಾಗನಿಂದ ಹೇಳಲ್ಪಟ್ಟವೆಂದಿದೆ. ದುರ್ಗಸಿಂಹ ವಸುಭಾಗರ ರಚಿತವಾದ ಪಂಚತಂತ್ರಗಳನ್ನು ಕನ್ನಡಿಸಿರುವಂತೆ ಹೇಳಿಕೊಂಡಿದ್ದಾನೆ. ಆದ್ದರಿಂದ ದುರ್ಗಸಿಂಹನ ಪಂಚತಂತ್ರಕ್ಕೂ ತಂತ್ರೋಪಾಖ್ಯಾನ, ತಂತ್ರು, ತಂತ್ರಿ, ತಂತ್ರೈ ತಂತೈಗಳಿಗೂ ವಸುಭಾಗನಿಂದ ರಚಿತವಾದ ಪಂಚತಂತ್ರ ಪುಸ್ತಕ ಮೂಲವಾಗಿದೆ. ಈ ಪಂಚತಂತ್ರದಿಂದ ಜನ್ಯವಾದ ಒಂದು ಗ್ರಂಥ ತಂತ್ರಿ, ತಂತ್ರೈ, ತಂತೈಗಳಿಗೆ ಮೂಲವಾಗಿದೆ.

	ತಂತ್ರಿ, ತಂತ್ರೈ, ತಂತೈಗಳು ಭರತಖಂಡಕ್ಕೆ ಪೂರ್ವದಲ್ಲಿರುವ ದೇಶಗಳಲ್ಲಿ ಪ್ರಚಾರವಾಗಿವೆ. ಹೀಗೆಯೇ ಭರತಖಂಡದ ಪಶ್ಚಿಮದಲ್ಲಿರುವ ದೇಶಗಳಲ್ಲಿಯೂ ಪಂಚತಂತ್ರ ಅನುವಾದಗಳು ಪ್ರಚಾರವಾಗಿವೆ. ಈ ಅನುವಾದಗಳು ತಂತ್ರಿ-ತಂತ್ರೈ-ತಂತೈಗಳಂತೆ ವಸುಭಾಗನ ಪಂಚತಂತ್ರದಿಂದ ಜನ್ಯವಾಗಿಲ್ಲ. ಇವುಗಳ ಮೂಲವಾದ ಪಂಚತಂತ್ರದ ಕರ್ತೃ ವಿಷ್ಣುಶರ್ಮ ಎಂಬುದರಲ್ಲಿ ಪ್ರಾಯಃ ಯಾವ ಸಂದೇಹವೂ ಇಲ್ಲ.

	ಬುರ್ಸೂ ಏ ಎಂಬುವನು ಪಂಚತಂತ್ರವನ್ನು ಪಾಲವಿ ಭಾಷೆಗೆ ಪರಿವರ್ತಿಸಿದನಷ್ಟೆ. ಅದೀಗ ಅನುಪಲಬ್ಧ. ಆದರೆ ಸುಮಾರು 570ರಲ್ಲಿ ಬೂರ್ ಎಂಬುವನಿಂದ ಪಾಲವಿ ಪುಸ್ತಕ ಸಿರಿಯಾಕ್ ಭಾಷೆಯಲ್ಲಿ ಅನುವಾದಗೊಂಡಿತು ಮತ್ತು ಸುಮಾರು 750ರಲ್ಲಿ ಅಬ್ದಲ್ಲಾ ಇಬ್ನ್ ಅಲ್-ಮೊಕಾಪಾ ಎಂಬುವನಿಂದ ಅರಬ್ಬೀ ಭಾಷೆಯಲ್ಲಿ ಅನುವಾದಗೊಂಡಿತು. ಸಿರಿಯಾಕ್ ಭಾಷೆಯ ಅನುವಾದವನ್ನು ಯಾರೂ ಇತರ ಭಾಷೆಗಳಲ್ಲಿ ಅನುವಾದ ಮಾಡಿರುವಂತೆ ಕಾಣುವುದಿಲ್ಲ. ಆದರೆ ಇಬ್ನ್ ಅಲ್-ಮೊಕಾಪಾನ ಅನುವಾದದ ಆಧಾರದ ಮೇಲೆ ಹಲವು ಅರಬ್ಬೀ ಗ್ರಂಥಗಳು ಹುಟ್ಟಿರುವುವಲ್ಲದೆ ಅದು ಇತರ ಭಾಷೆಗಳಲ್ಲಿಯೂ ಅನುವಾದ ಮಾಡಲ್ಪಟ್ಟು ಆ ಅನುವಾದಗಳಿಂದ ಪುನಃ ಇತರ ಅನುವಾದಗಳೂ ಹುಟ್ಟಿವೆ. ಹರ್ಟೆಲ್‍ನ ಸಂಶೋಧನ ಗ್ರಂಥದಲ್ಲಿ ಇಂಥ ಸುಮಾರು 150 ಅನುವಾದಗಳ ವಿವರಗಳಿವೆ. ಈ ಅನುವಾದಗಳು ಪಾರಸಿ, ರಬ್ಬೀ, ಗ್ರೀಕ್, ಲ್ಯಾಟಿನ್, ಹೀಬ್ರೂ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್, ಡಚ್, ತುರ್ಕಿ, ಮೊದಲಾದ ಭಾಷೆಗಳಲ್ಲಿವೆ. ಇವುಗಳಲ್ಲಿ ಕೆಲವು ಪದ್ಯರೂಪದವು. ಕೆಲವು ಭಾಷೆಗಳಲ್ಲಿ ಐದು ಆರು ಭಿನ್ನಭಿನ್ನವಾದ ಅನುವಾದಗಳೂ ಸಿಗುತ್ತವೆ.

	ಭರತ ಖಂಡದ ಪಂಚತಂತ್ರದ ಅನುವಾದಗಳು ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ರಾಜಸ್ಥಾನೀ ಮೊದಲಾದ ಭಾಷೆಗಳಲ್ಲಿವೆ.

	ಬೈಬಲ್ ಗ್ರಂಥವನ್ನು ಬಿಟ್ಟರೆ ಪ್ರಪಂಚದಲ್ಲಿನ ಅಧಿಕ ಸಂಖ್ಯೆಯ ಭಾಷೆಗಳಲ್ಲಿ ದೊರೆಯುವ ಗ್ರಂಥ ಪಂಚತಂತ್ರವೇ ಎಂಬ ಅಭಿಪ್ರಾಯವನ್ನು ಕೆಲವು ಪಂಡಿತರು ವ್ಯಕ್ತಪಡಿಸಿದ್ದರು. ಇದರಲ್ಲಿ ಬಹುಮಟ್ಟಿಗೆ ಸತ್ಯಾಂಶವಿದೆಯೆಂದು ಹರ್ಟೆಲ್ ಮತ್ತು ಎಜರ್ಟನ್ ಒಪ್ಪಿಕೊಂಡಿರುತ್ತಾರೆ.

	ಭರತಖಂಡದ ಅನೇಕ ದೇವಾಲಯಗಳ ಗೋಡೆಗಳಲ್ಲಿ ಭಾರತ ಮತ್ತು ರಾಮಾಯಣದ ಕಥಾ ಚಿತ್ರಗಳಂತೆ ಪಂಚತಂತ್ರದ ಕಥೆಗಳೂ ಚಿತ್ರಿತವಾಗಿರುವುದುಂಟು. ಉದಾಹರಣೆಗಾಗಿ ಬೇಲೂರು ದೇವಾಲಯ, ಬೆಲ್ಗಾಮೆಯಲ್ಲಿರುವ ತ್ರಿಪುರಾಂತಕೇಶ್ವರನ ಗುಡಿ. ಹೆಗ್ಗಡದೇವನ ಕೋಟೆ ತಾಲ್ಲೂಕು ಕಿತ್ತೂರಿನ ಸಮೀಪದಲ್ಲಿರುವ ಒಂದು ರಾಮೇಶ್ವರದೇವಾಲಯ ಮದರಾಸಿನ ಸಮೀಪದಲ್ಲಿ ಮಹಾಬಲಿಪುರ ಬಿಹಾರ ಪ್ರಾಂತ್ಯದಲ್ಲಿ ನಾಲಂದಾದಲ್ಲಿರುವ ಗುಪ್ತರ ಕಾಲದ ಜೀರ್ಣದೇವಾಲಯ- ಇವುಗಳಲ್ಲೆಲ್ಲ ಪಂಚತಂತ್ರ ಕಥೆಗಳು ಚಿತ್ರಿತವಾಗಿವೆ. ಹೀಗೆಯೇ ಯವದ್ವೀಪದಲ್ಲಿರುವ ದೇವಾಲಯಗಳಲ್ಲಿಯೂ ಭಾರತ ರಾಮಾಯಣ ಕಥೆಗಳೂ ಪಂಚತಂತ್ರ ಕಥೆಗಳೂ ಚಿತ್ರಿತವಾಗಿರುವುವು. ಕ್ರಿ.ಶ.ಸುಮಾರು 900ರಲ್ಲಿ ನಿರ್ಮಿತವಾದ ಮೆಂದೂತ್ ದೇವಾಲಯ ಒಂದರಲ್ಲಿಯೇ 20ಕ್ಕಿಂತಲೂ ಹೆಚ್ಚು ಪಂಚತಂತ್ರ ಕಥೆಗಳು ಚಿತ್ರಿಸಲ್ಪಟ್ಟಿವೆ. ಈ ಕಥೆಗಳಲ್ಲಿ ಜೇನುತುಪ್ಪದ ತೊಟ್ಟಿನಿಂದ ಆದ ವಿಪ್ಲವ; ಕಪಿ, ಹುಲಿ, ಮತ್ತು ಕೃತಘ್ನನಾದ ಬೇಡ-ಎಂಬ ಕಥೆಗಳೂ ಸೇರಿವೆ. ಈ ಕಥೆಗಳಾದರೆ ಪ್ರಾಚೀನ ಪಂಚತಂತ್ರಗಳೆಂದು ಮೇಲೆ ಹೇಳಲ್ಪಟ್ಟ ಯಾವ ಪಂಚತಂತ್ರದಲ್ಲಿಯೂ ಇಲ್ಲ; ಆದರೆ ದಾಕ್ಷಿಣಾತ್ಯ ಪಂಚತಂತ್ರದ ಬೃಹತ್ಪಾಠದಲ್ಲಿ ಇವು ದೊರೆಯುತ್ತವೆ. ಆದ್ದರಿಂದ ಈ ಪಂಚತಂತ್ರಪಾಠ ಕ್ರಿ.ಶ 900ಕ್ಕಿಂತ ಪೂರ್ವದಲ್ಲಿಯೇ ರಚಿಸಲ್ಪಟ್ಟಿರಬೇಕು; ಎಂದರೆ ಪ್ರಾಚೀನ ಪಂಚತಂತ್ರಗಳ ವರ್ಗದಲ್ಲಿ ಈ ಪಂಚತಂತ್ರವನ್ನೂ ಸೇರಿಸಬೇಕು.

	ಪಂಚತಂತ್ರದ ಮೂಲ ಪುಸ್ತಕ ನಮಗೆ ದೊರೆತಿಲ್ಲ. ಆದರೆ ನಮಗೆ ದೊರೆತಿರುವ ದಾಕ್ಷಿಣಾತ್ಯ, ಪಂಚತಂತ್ರ, ಲಾಟೀಯ ಪಂಚತಂತ್ರ, ಪೂರ್ಣಭದ್ರನ ಪಂಚತಂತ್ರ ಮತ್ತು ಕೋನೆಗಾರ್ಟೆನಾ ಪ್ರಕಟಿಸಿರುವ ಪಂಚತಂತ್ರ (ನಿರ್ಣಯಸಾಗರ ಮುದ್ರಾಲಯದಲ್ಲಿ ಮುದ್ರಿತವಾಗಿರುವ ಪಂಚತಂತ್ರ ಇವೆಲ್ಲವೂ ಸುಲಭ ಸರಳ ಶೈಲಿಯಲ್ಲಿವೆ. ದೀರ್ಘ ವಾಕ್ಯಗಳಿಲ್ಲ. ಸಮಸ್ತಪದಗಳೂ ವರ್ಣನೆಗಳೂ ಅಲಂಕಾರಗಳೂ ಇಲ್ಲವೆಂದೇ ಹೇಳಬಹುದು. ಆದ್ದರಿಂದ ಬಾಲಕರಿಗೆ ಸಂಸ್ಕøತವನ್ನು ಕಲಿಸುವುದಕ್ಕಾಗಿ ಈ ಗ್ರಂಥವನ್ನು ಅನೇಕರು ಉಪಯೋಗಿಸುತ್ತಿದ್ದಾರೆ.										(ಎ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ